ಚಾಲ್ರ್ಸ್ (ಹಂಗರಿಯ ದೊರೆ)

ಚಾಲ್ರ್ಸ್ I : 1288-1342. ಹಂಗರಿಯ ದೊರೆ (1301; 1309-42). ನೇಪಲ್ಸಿನ ಚಾಲ್ರ್ಸ್ ಮಾರ್ಟೆಲ್ ಇವನ ತಂದೆ. ಈತನ ತಾಯಿ ಕ್ಲೆಮೆನ್ಷಿಯ. ಈಕೆ 1ನೆಯ ರುಡಾಲ್ಫ್ ಚಕ್ರವರ್ತಿಯ ಮಗಳು. 1301ರಲ್ಲಿ 3ನೆಯ ಆಂಡ್ರ್ಯೂ ತೀರಿಕೊಂಡಾಗ ಚಾಲ್ರ್ಸ್ ಹಂಗರಿಯ ದೊರೆಯಾದ. ಐದನೆಯ ಸ್ಟೀಫನನ ಮರಿಮಗನೆಂಬ ಕಾರಣದಿಂದ ಇವನಿಗೆ ಸಿಂಹಾಸನ ದಕ್ಕಿತು. ಚರ್ಚೂ ಇದನ್ನು ಅನುಮೋದಿಸಿತು. ಆದರೆ ಬೊಹೀಮಿಯದ 2ನೆಯ ವೆನ್ಸೆಸ್ಲಾಸ್ ತಕರಾರು ಹೂಡಿದ್ದರಿಂದ ಚಾಲ್ರ್ಸ್ ಅವನಿಗೆ ಸಿಂಹಾಸನವನ್ನು ಬಿಟ್ಟುಕೊಡಬೇಕಾಯಿತು. 1305ರಲ್ಲಿ ವೆನ್ಸೆಸ್ಲಾಸ್ ತನ್ನ ಅಧಿಕಾರವನ್ನು ಕೆಳ ಬವೇರಿಯದ ಆಟೊಗೆ ಬಿಟ್ಟುಕೊಟ್ಟ. ಹಂಗರಿಯನರು ಅವನನ್ನು ಸೆರೆಹಿಡಿದು 1309ರಲ್ಲಿ ಚಾಲ್ರ್ಸನಿಗೆ ಪಟ್ಟ ಕಟ್ಟಿದರು. ಈತ ಒಳ ಜಗಳಗಳನ್ನು ಹತ್ತಿಕ್ಕಿ ಪೋಲೆಂಡ್ ಜೊತೆಗೆ ರಕ್ಷಣಾ ಒಪ್ಪಂದ ಮಾಡಿಕೊಂಡು (1335) ಹಂಗರಿಯನ್ನು ಮತ್ತೊಮ್ಮೆ ಯೂರೋಪಿನ ಹಿರಿಯ ರಾಷ್ಟ್ರಗಳ ಸಾಲಿಗೆ ತಂದ. ಶ್ರೇಷ್ಠ ರಾಜಕಾರಣಿಯಾದ ಈತ ಹಂಗರಿಯನ್ನು ನಾಗರಿಕ ರಾಷ್ಟ್ರವಾಗಿ ಪರಿವರ್ತಿಸಿದ.
(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ